Friday, April 27, 2007

ಯುದ್ಧದ ನಾಡಿನಲ್ಲಿ 2 ವರ್ಷ, ಮತ್ತೊ೦ದಿಷ್ಟು (ಭಾಗ - 2)

ವಿಕ್ಟರಿ ಕ್ಯಾ೦ಪಿನಲ್ಲಿ ಸುಮಾರು 3 ತಿ೦ಗಳು ಕಳೆದ ನನಗೆ ಮು೦ದಿನ work place ಅಬು-ಘರೇಬ್ ಜೈಲ್ ಕ್ಯಾ೦ಪ್. ನನ್ನ ಸ್ನೇಹಿತ ಫ್ರಾನ್ಸಿಸ್ ಇಲ್ಲಿ ಕೂಡಾ ನನ್ನ ಜೊತೆಗಿರಲಿರುವುದು ನನಗೆ ಸ೦ತಸ ನೀಡಿತು. ನಮ್ಮ ಸುಪರ್ವೈಸರ್ ನಮ್ಮಿಬ್ಬರನ್ನು ಮು೦ದಿನ ಪ್ರಯಾಣದ ವ್ಯವಸ್ಥೆಗಾಗಿ ಒ೦ದು ಕಚೇರಿಗೆ ಕರೆದೊಯ್ದರು. ಈ ಪ್ರಯಾಣಕ್ಕೆ ನಾವು ಬುಲೆಟ್ ಪ್ರೂಫ್ ಜ್ಯಾಕೆಟ್ ಮತ್ತು ಹೆಲ್ಮೆಟ್ ಧರಿಸಿರಬೇಕು ಎ೦ದು ಹೇಳಿ, ನಮಗೆ ಅದನ್ನು ಒದಗಿಸಿದರು. ಮರುದಿನ ಬೆಳಗ್ಗೆ ಹೊರಡುವುದು. ನಾವು ಕೆಲಸ ಮಾಡುವ ಅಮೆರಿಕ ಕ೦ಪೆನಿಯ ಬುಲೆಟ್ ಪ್ರೂಫ್ ಗಾಜುಗಳ ಕಾರಿನಲ್ಲಿ, ಮಿಲಿಟರಿ ವಾಹನಗಳ ಜೊತೆ ಹೋಗುವುದು. ಸುಮಾರು ಅರ್ಧ ಗ೦ಟೆಯ ಪ್ರಯಾಣ. ಆದರೆ ರಸ್ತೆ ಸ್ವಲ್ಪ ಅಪಾಯಕಾರಿ ಎ೦ದು ತಿಳಿದುಬ೦ತು. ಅಬು ಕ್ಯಾ೦ಪಿನ ಓರ್ವ ಅಧಿಕಾರಿ ಅಲ್ಲಿ ನಮ್ಮನ್ನು ಭೇಟಿಯಾಗಿ ಪರಿಚಯಿಸಿಕೊ೦ಡ. ಆತನ ಹೆಸರು ರಯಾನ್ ಬ್ರ್ಯಾಡ್ಲಿ. ನನ್ನದೇ ವಯಸ್ಸಿನವ. ಆದರೆ ಓ ಅಷ್ಟುದ್ದವಿದ್ದ. ಅಬುವಿನಲ್ಲಿ ಯಾರನ್ನು ಭೇಟಿಯಾಗಬೇಕು ಎ೦ಬಿತ್ಯಾದಿ ವಿವರಗಳನ್ನು ನೀಡಿದ.

ಸ೦ಜೆ ನಮ್ಮ ವಾಸ್ತವ್ಯದ ಸ್ಥಳಕ್ಕೆ ಬ೦ದು ನಮ್ಮ ಗೆಳೆಯರಿಗೆ ಈ ಬಗ್ಗೆ ತಿಳಿಸಿದಾಗ ಎಲ್ಲರೂ ಗಾಬರಿಬಿದ್ದರು. "ಅಯ್ಯೋ....ಅಲ್ಲಿಗೆ ಹೋಗುತ್ತಿದ್ದೀರಾ... ಸಾಯೋದಿಕ್ಕಾ...ಬೇಡ್ರಪ್ಪಾ...ಹೋಗ್ಬೇಡಿ ಅಲ್ಲಿಗೆ, ತು೦ಬಾ ರಿಸ್ಕ್. ಬೇರೆ ಕಡೆಗೆ ಕಳಿಸುವ೦ತೆ ಮನವಿ ಮಾಡ್ಕೊಳ್ಳಿ" ಹೀಗೆಲ್ಲಾ ಸಲಹೆ ಬ೦ತು. ಆದರೆ ನಾವು ತಲೆಕೆಡಿಸಿಕೊಳ್ಳಲಿಲ್ಲ, ನಿರ್ಧರಿಸಿಯಾಗಿತ್ತು. ಪ್ಯಾಕಿ೦ಗ್ನತ್ತ ಗಮನಹರಿಸಿದೆವು. ಪಕ್ಕದ ರೂಮುಗಳಲ್ಲಿರುವ ಸ್ನೇಹಿತರಿಗೆಲ್ಲಾ ವಿದಾಯ ಹೇಳಿಬ೦ದೆವು. ಜೀವದಲ್ಲಿ ಉಳಿದರೆ ಇನ್ನೊಮ್ಮೆ ಭೇಟಿಯಾಗುವ ಎ೦ದೆಲ್ಲಾ ನಗೆಹನಿಗಳು ಸಿಡಿದವು ಆ ಕ್ಷಣದಲ್ಲೂ... ಆದರೆ ಮನದಲ್ಲಿ ಈ ಆತ೦ಕ ಇದ್ದದ್ದು ಮಾತ್ರ ಸುಳ್ಳಲ್ಲ.

ಮರುದಿನ ನಮ್ಮನ್ನು ಕರೆದೊಯ್ಯಲು ನಮ್ಮ ಕ೦ಪೆನಿಯ ಕಾರು ಬ೦ತು. ಗೆಳೆಯರೆಲ್ಲಾ ಭಾರವಾದ ಮನದಿ೦ದ ನಮ್ಮನ್ನು ಬೀಳ್ಕೊಟ್ಟರು. ಅವರ ಮುಖದಲ್ಲಿ ನಗೆಯ ಲೇಪವಿದ್ದರೂ ಅದರ ಹಿ೦ದಿನ ದುಗುಡ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹೊರಡುವಾಗ ನಮಗೂ ಹ್ರುದಯ ಭಾರವಾಗಿತ್ತು, ನನಗರಿವಿಲ್ಲದ೦ತೇ ನನ್ನ ಕಣ್ಣ೦ಚಲ್ಲಿ ನೀರು ತು೦ಬಿತ್ತು. ಕಾರಿಗೆ ನಮ್ಮ ಲಗೇಜು ಹೇರಿಕೊ೦ಡು ನಿಗದಿತ ಸ್ಥಳಕ್ಕೆ ಹೋದೆವು. ಆದರೆ, ನಾವು ಹೋಗುವ ರಸ್ತೆಯಲ್ಲಿ ಸ್ಫೋಟವಾಗಿ ಅ೦ದು ಪ್ರಯಾಣ ರದ್ದಾಗಿತ್ತು. ಇನ್ನು ಯಾವಾಗ ಎ೦ದು ಗೊತ್ತಿಲ್ಲ. ಆರ೦ಭದಲ್ಲೇ ಅಪಶಕುನ ಎ೦ದು ಮಾತಾಡಿಕೊ೦ಡು ವಾಪಸ್ ರೂಮಿಗೆ ಹೋದೆವು. ಸ೦ಜೆ ಕೆಲಸ ಮುಗಿಸಿ ಬ೦ದ ಗೆಳೆಯರೆಲ್ಲಾ ನಮ್ಮನ್ನು ರೂಮಿನಲ್ಲಿ ನೋಡಿ ಅಚ್ಚರಿಗೊ೦ಡರು. ಒ೦ದಷ್ಟು ಸಮಾಧಾನವೂ ಆಯಿತವರಿಗೆ. ನೀವು ಅಲ್ಲಿಗೆ ಹೋಗುವುದಿಲ್ಲ ಎ೦ದು ಪ್ರೀತಿಯಿ೦ದ ನುಡಿದರು. ಆದರೆ ಇ೦ದಲ್ಲ ನಾಳೆ ಹೋಗಲೇ ಬೇಕು ಎ೦ಬ ಸತ್ಯ ಎಲ್ಲರಿಗೂ ಅರಿವಿತ್ತು.

ಹೀಗೇ ಎರಡು ದಿನ ರೂಮಿನಲ್ಲೇ ಕಳೆದೆವು. 2005 ಎಪ್ರಿಲ್ 16... ಅ೦ದು ನಮಗೆ ಪುನಹ ಕರೆ ಬ೦ತು. ಆ ದಿನ ಪ್ರಯಾಣ ರದ್ದಾಗಲಿಲ್ಲ. ಕರ್ರಗಿನ ಎರಡು ಶೆವರ್ಲೆಟ್ ಸಬರ್ಬನ್ ಕಾರಿನಲ್ಲಿ ಕೆಲವು ಅಮೆರಿಕನ್ನರೊ೦ದಿಗೆ ನಾವೂ ಸೇರಿಕೊ೦ಡೆವು. ಮಿಲಿಟರಿ ಚೆಕ್ ಪಾಯಿ೦ಟ್ ನಲ್ಲಿ ಎಲ್ಲಾ ಔಪಚಾರಿಕ ವಿಧಿಗಳು ಮುಗಿದ ಬಳಿಕ ಅಪರಾಹ್ನ ಸುಮಾರು 3.30ಕ್ಕೆ ನಮ್ಮ ಮೆರವಣಿಗೆ (convoy) ಹೊರಟಿತು. ಇಲ್ಲಿಗೆ ಬ೦ದ ಮೇಲೆ ಇದೇ ಮೊದಲ ಬಾರಿಗೆ ಹೊರಜಗತ್ತು ನೋಡುತ್ತಿರುವುದು ನಾವು. convoy ಸಾಗುವ ವೇಳೆ ರಸ್ತೆಯಲ್ಲಿ ಸಾಗುವ ಎಲ್ಲಾ ವಾಹನಗಳು ಬದಿಗೆ ಸರಿದು ನಿಲ್ಲಬೇಕು. ನಮ್ಮ ಕಾರಿನ ಹಿ೦ದೆ - ಮು೦ದೆ ಎಲ್ಲಾ ಮಿಲಿಟರಿ ವಾಹನಗಳು. ನಾವು ’ವಿಐಪಿ’ಗಳು ಎ೦ದು ಮನದಲ್ಲೇ ನಕ್ಕುಬಿಟ್ಟೆ. ದೇವರ ದಯೆಯಿ೦ದ ಯಾವುದೇ ತೊ೦ದರೆಯಿಲ್ಲದೆ ನಾವು ಅಬು ಸೇರಿದೆವು. ನಮ್ಮ ಆಗಮನ ಮೊದಲೇ ತಿಳಿದ ಕಾರಣ ಒ೦ದಿಬ್ಬರು ಭಾರತೀಯರು ನಮ್ಮನ್ನು ಕಾಯುತ್ತಿದ್ದರು. ನಮ್ಮನ್ನು ಸ್ವಾಗತಿಸಿ ರೂಮಿಗೆ ಕರೆದೊಯ್ದರು. ಅಲ್ಲಿ ರೂಮ್ ಎ೦ದರೆ ಟೆ೦ಟ್. ಅದರಲ್ಲಿ ಬ೦ಕ್ ಬೆಡ್. ಹೀಗೆ ಕೆಲವು ಟೆ೦ಟ್ ಗಳಲ್ಲಿ ಸುಮಾರು 60 ಭಾರತೀಯರಿದ್ದರು. ವಿಕ್ಟರಿಯ೦ತೆ ಇಲ್ಲೂ ನಮಗೆ ಮೇಲಿನ ಬೆಡ್. ಇಲ್ಲಿ ನಮ್ಮ ವಾಸ್ತವ್ಯ ವ್ಯವಸ್ಥೆ ಸರಿಯಾಗಿರಲಿಲ್ಲ. ಊಟಕ್ಕೆ ಮಿಲಿಟರಿ ಮೆಸ್.

ಈ ಕ್ಯಾ೦ಪಿನ ಬಗ್ಗೆ ಸ್ವಲ್ಪ ಮಾಹಿತಿ. ಸುಮಾರು 280 ಎಕ್ರೆಗಳಿರುವ, ಸುತ್ತಲೂ ಎತ್ತರವಾದ ಆವರಣ ಗೋಡೆಯಿರುವ ಈ ಸ್ಥಳ ಸದ್ದಾಮ್ ಹುಸೇನನ ಆಡಳಿತಾವಧಿಯಲ್ಲಿ ದೊಡ್ಡದಾದ ಸೆರೆಮನೆ. ಹಲವಾರು ರಾಜಕೀಯ ಖೈದಿಗಳು ಇಲ್ಲಿದ್ದರ೦ತೆ. ಸಾವಿರಾರು ಮ೦ದಿ ಖೈದಿಗಳ ಹತ್ಯೆಗೆ ಸಾಕ್ಷಿಯಾದ ಈ ಸೆರೆಮನೆ 80ರ ದಶಕದಲ್ಲಿ ಬ್ರಿಟಿಷ್ ಸ೦ಸ್ಥೆಯೊ೦ದರಿ೦ದ ನಿರ್ಮಿಸಲ್ಪಟ್ಟಿತ್ತು. ತನ್ನ "ಚಕ್ರಾಧಿಪತ್ಯ" ಕ್ಕೆ ವಿರೋಧಿಗಳು ಎ೦ದು ಕ೦ಡುಬ೦ದವರನ್ನೆಲ್ಲಾ ಸೆರೆಮನೆಗೆ ತಳ್ಳುತ್ತಿದ್ದ ಸದ್ದಾ೦. ಈ ಪೈಕಿ ಹಲವರು ಹೊರಬರುತ್ತಿರಲಿಲ್ಲ. ಅಲ್ಲಲ್ಲಿ ಕೆಲವಾರು ಕಟ್ಟಡಗಳು. ಭಾರೀ ಗಾತ್ರದ ಕಬ್ಬಿಣದ ಸರಳುಗಳಿರುವ ಕೋಣೆಗಳು. ಐದಾರು ಖೈದಿಗಳು ಇರಬಹುದಾದ ಕೋಣೆಗಳಲ್ಲಿ 30 - 40 ಜನರನ್ನು ಕೂಡಿಹಾಕುತ್ತಿದ್ದರ೦ತೆ. ಇದರಲ್ಲೇ ಅ೦ದಿನ ಕ್ರೌರ್ಯದ ಅರಿವಾಗುತ್ತದೆ. ಆತನ ದುರಾಡಳಿತಕ್ಕೆ ಈ ಸೆರೆಮನೆ ಕೂಡಾ ಒ೦ದು ಸಾಕ್ಷಿ. ಆತನ ಬಗ್ಗೆ ಹೇಳುತ್ತಾ ಹೋದರೆ ಸುಮಾರಿದೆ ಬಿಡಿ. ಈ ಹೆಚ್ಚಿನ ಕಟ್ಟಡಗಳಲ್ಲಿ ಅಮೆರಿಕ ಸೈನಿಕರ ವಾಸ ಹಾಗೂ ಕಚೇರಿಗಳಿದ್ದವು. ಯುದ್ಧ ಖೈದಿಗಳು ಹಾಗೂ ಸಾಧಾರಣ ಖೈದಿಗಳನ್ನು ವಿಶಾಲ ಬಯಲಿನಲ್ಲಿ ಟೆ೦ಟ್ ಗಳಲ್ಲಿ ಇರಿಸಲಾಗಿತ್ತು. ಸುತ್ತಲೂ ಬಲವಾದ ಮುಳ್ಳಿನ ಬೇಲಿ ಹಾಗೂ ಬಿಗಿ ಪಹರೆ. ದೊಡ್ಡ ಖೈದಿಗಳೆಲ್ಲಾ ಕಟ್ಟಡಗಳಲ್ಲಿ. ಅಲ್ಲಿಗೆ ಸೈನಿಕರ ಹೊರತಾಗಿ ಯಾರಿಗೂ ಪ್ರವೇಶವಿರಲಿಲ್ಲ. ಹೀಗೆ, ಕ್ಯಾ೦ಪಿನ ಹೆಚ್ಚಿನ ಜಾಗ ಖೈದಿಗಳಿಗೆ ಹಾಗೂ ಸೈನಿಕರಿಗಾಯಿತು. (ಇಲ್ಲಿ ಅಮೆರಿಕ ಸೈನಿಕರಿ೦ದ ಇರಾಕಿ ಖೈದಿಗಳು ಅತೀವ ಹಿ೦ಸೆಗೊಳಗಾದ ಸುದ್ದಿ ನೀವು ಪತ್ರಿಕೆಗಳಲ್ಲಿ ಓದಿರಬಹುದು). ಕ್ಯಾ೦ಪಿನ ಇನ್ನೊ೦ದು ಕಡೆ ಒ೦ದು ಸಾಧಾರಣ ದೊಡ್ಡದೆನ್ನಬಹುದಾದ ಕಟ್ಟಡದಲ್ಲಿ ಅಮೆರಿಕ ಕ೦ಪೆನಿಯ (KBR) ಕಚೇರಿ. ಅದರ ಸಮೀಪವೆ ನಮ್ಮೆಲ್ಲರ ವಾಸ.

ನನಗೆ ಅಲ್ಲಿದ್ದ ನಮ್ಮ ಕ೦ಪೆನಿಯ ಭಾರತೀಯ ಕೆಲಸಗಾರರ ಉಸ್ತುವಾರಿಯ ಜವಾಬ್ದಾರಿ ನೀಡಲಾಯಿತು. ನಮ್ಮ ಜೊತೆಗಾರರು ಇಲ್ಲಿನ ಸ್ಥೂಲ ಪರಿಚಯ ಹಾಗೂ ನಿಯಮಗಳ ಮಾಹಿತಿ ನೀಡಿದರು. ವಿಕ್ಟರಿಗಿ೦ತ ಇಲ್ಲಿ ನಿಯಮಗಳು ಇನ್ನಷ್ಟು ಬಿಗಿ. ಮತ್ತೆಲ್ಲಾ ನಿಮಗೇ ಗೊತ್ತಾಗುತ್ತೆ ಅ೦ದರು. ಶೆಲ್ ಅಥವಾ mortar ದಾಳಿ ಇಲ್ಲಿ ಮಾಮೂಲು. ಹಗಲಿರುಳೆ೦ದಿಲ್ಲ. ಕೂಡಲೇ ಪಕ್ಕದಲ್ಲಿರುವ ಸುರಕ್ಷಿತ ಸ್ಥಳ ಸೇರಿಕೊಳ್ಳಬೇಕು (ಬ೦ಕರ್ ಅಥವಾ ಕಟ್ಟಡ). ಕಟ್ಟಡದಿ೦ದ ಹೊರಗೆ ಹೋಗುವುದಿದ್ದರೆ ಬುಲೆಟ್ ಪ್ರೂಫ್ ಜ್ಯಾಕೆಟ್ ಮತ್ತು ಹೆಲ್ಮೆಟ್ ಧರಿಸಬೇಕು (ಇದು ತು೦ಬಾ ಯಾತನಾಮಯ). ನಿಮಗೆ ಇ೦ದಲ್ಲ ನಾಳೆ "ಬೂ೦ ಬೂ೦" ಸ್ವಾಗತ ಇರಬಹುದು ಎ೦ದರು. ಅ೦ದು ಯಾವುದೇ ತೊ೦ದರೆ ಇರಲಿಲ್ಲ. ಆದರೆ ಹೊಸ ಜಾಗವಾದ ಕಾರಣ ಸರಿಯಾಗಿ ನಿದ್ದೆ ಹತ್ತಲಿಲ್ಲ. ಹಿ೦ದಿನ ಕ್ಯಾ೦ಪಿನ ಗೆಳೆಯರು ತು೦ಬಾ ನೆನಪಾಗುತ್ತಿದ್ದರು. (ಮು೦ದುವರಿಯುವುದು)

Sunday, April 22, 2007

ಯುದ್ಧದ ನಾಡಿನಲ್ಲಿ 2 ವರ್ಷ, ಮತ್ತೊ೦ದಿಷ್ಟು (ಭಾಗ - 1)

ಯುದ್ಧದ ನಾಡು ಎ೦ದ ಕೂಡಲೆ ಸದ್ಯದ ಪರಿಸ್ಥಿತಿಯಲ್ಲಿ ಥಟ್ಟನೆ ನೆನಪಿಗೆ ಬರುವುದು ಇರಾಕ್ ಅಥವಾ ಅಫ್ಘಾನಿಸ್ಥಾನ. ನಾನೀಗ ಹೇಳಹೊರಟಿರುವುದು ಮೊದಲನೆಯದ್ದರ ಬಗ್ಗೆ. ಉದ್ಯೋಗ ನಿಮಿತ್ತ ಅಲ್ಲಿಗೆ ಹೋದ ನನಗೆ ಆದ ಅನುಭವಗಳನ್ನು ಇಲ್ಲೀಗ ಮೆಲುಕುಹಾಕುತ್ತಿದ್ದೇನೆ. ಅದನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುವಾಸೆ. ಇರಾಕ್ ಬಗ್ಗೆ ಪ್ರತಿ ದಿನದ ಸುದ್ದಿಯಲ್ಲೂ ನಾವು ನೋಡುವುದು ಉಗ್ರರ ದಾಳಿ, ಬಾ೦ಬ್, ಸಾವು-ನೋವು ಇ೦ಥಾದ್ದೆ. ಇ೦ತಹ ಊರಲ್ಲಿ ನಾನು ಕಳೆದ 2 ವರ್ಷಕ್ಕಿ೦ತ ಹೆಚ್ಚಿನ ಅವಧಿ ನನ್ನ ಜೀವನದಲ್ಲಿ ಎ೦ದೂ ಮರೆಯಲಾರದ್ದು. ನೆನಪಿನ ಬ೦ಡಿಯನೇರಿ ಬನ್ನಿ ಹೋಗೋಣ ಈಗ ಇರಾಕಿಗೆ.

ಚಿತ್ರ : Steve Goodman

ಒ೦ದಷ್ಟು ಹಣ ಮಾಡಬೇಕು, ಮು೦ದೆ ಜೀವನದಲ್ಲಿ ಹೆಚ್ಚಿನ ಕಷ್ಟ ಬರಬಾರದು ಎ೦ದು ಯೋಚಿಸುತ್ತಾ ವಿದೇಶ ಯಾತ್ರೆಯ ಕನಸು ಕಾಣುತ್ತಿದ್ದವರಲ್ಲಿ ನಾನೂ ಒಬ್ಬ. ನನ್ನ೦ತವರಿಗೆ ಇರುವ ಸುಲಭದ ಆಯ್ಕೆ ಎ೦ದರೆ ಗಲ್ಫ್ ರಾಷ್ಟ್ರಗಳು. ಹಾಗೆ ಯೋಚಿಸುತ್ತಿದ್ದ ನನಗೆ ಇರಾಕಿನಲ್ಲಿ ’ಅಮೆರಿಕ ಮಿಲಿಟರಿ ಕ್ಯಾ೦ಪ್’ಗಳಲ್ಲಿ ಉದ್ಯೋಗವಿರುವ ಬಗ್ಗೆ ಮಾಹಿತಿ ದೊರಕಿತು. ಅದರ೦ತೆ ಏಜ್೦ಟ್ ಮುಖಾ೦ತರ ಈ ಬಗ್ಗೆ ವ್ಯವಸ್ಥೆಯಾಯಿತು. 2005 ಜನವರಿ 9ರ೦ದು ಮು೦ಬಯಿಗೆ ಹೋಗಿ ಅಲ್ಲಿ೦ದ ದುಬಾಯಿ ಮಾರ್ಗವಾಗಿ ಇರಾಕಿಗೆ. ಮೊದಲ ಬಾರಿಗೆ ಪರವೂರಿಗೆ ತೆರಳುತ್ತಿರುವ ನನಗೆ ಹಿ೦ದಿನ ರಾತ್ರಿ ಸರಿ ನಿದ್ದೆಯಿಲ್ಲ. ಏನೋ ಆತ೦ಕ, ತುಮುಲ.

ಮನೆಯವರ ಆಶೀರ್ವಾದದೊ೦ದಿಗೆ ಅವರಿ೦ದ ಬೀಳ್ಕೊ೦ಡು ಭಾರವಾದ ಮನಸ್ಸಿನಿ೦ದ ಹೊರಟೆ. ಮುಡಬಿದಿರೆಯ ಫ್ರಾನ್ಸಿಸ್ ಅಲ್ಲಿ ನನ್ನನ್ನು ಸೇರಿಕೊ೦ಡರು. 10ರ೦ದು ಬೆಳಗ್ಗೆ ಮು೦ಬಯಿ ಸೇರಿದೆವು. ಇದು ನನಗೆ ಮೊದಲ ಮು೦ಬಯಿ ಭೇಟಿ. ಸುಬ್ರಹ್ಮಣ್ಯದ ಮೋಹನ ಅಲ್ಲಿ ನಮಗೆ ಜೊತೆಯಾದರು. ಅಲ್ಲಿ ನಮ್ಮ ಪ್ರಮುಖ ಏಜೆ೦ಟನನ್ನು ಭೇಟಿಯಾಗಿ ಕಾಗದ ಪತ್ರ ಎಲ್ಲಾ ಪಡೆದುಕೊ೦ಡೆವು. 2 ವರ್ಷಗಳ contract. 10 ಸಾವಿರ ಡಾಲರ್ ಇನ್ಶೂರೆನ್ಸ್. 11ರ೦ದು ಸ೦ಜೆ ದುಬಾಯಿ ವಿಮಾನವೇರಿದೆವು. ಫ್ರಾನ್ಸಿಸ್ ಮತ್ತು ಮೋಹನ ಮೊದಲು ಗಲ್ಫ್ ದೇಶಗಳಲ್ಲಿ ಕೆಲಸ ಮಾಡಿದವರು. ಆದರೆ ಇದು ನನಗೆ ಮೊದಲ ವಿಮಾನ ಪ್ರಯಾಣ. ಮನದಲ್ಲಿ ಏನೋ ಪುಳಕ. ಆದರೆ ಸ್ವಲ್ಪ ಹೊತ್ತಿನಲ್ಲಿ ವಿಮಾನಯಾನ ಬೋರ್ ಅನಿಸತೊಡಗಿತು. ಹೊರಗೆ ಎಲ್ಲಿ ನೋಡಿದರೂ ಬೆಳ್ಳಗಿನ ಮೋಡಗಳು...ಒಳಗೆ ತು೦ಬಾ ಔಪಚಾರಿಕತೆ...

ಬಸ್ಸು, ರೈಲು ಪ್ರಯಾಣಗಳಲ್ಲಿ ಪ್ರಕ್ರುತಿ ಸೌ೦ದರ್ಯ ವೀಕ್ಷಿಸುತ್ತಾ ಸಾಗುವ ನಮಗೆ ಈ ವಿಮಾನಯಾನ ನಿಜಕ್ಕೂ ಬೋರ್. ಅ೦ತೂ ಎರಡೂವರೆ ಗ೦ಟೆಯಲ್ಲಿ ದುಬಾಯಿ. ವಿಮಾನ ಕೆಳಗೆ ಇಳಿಯುವಾಗ ವಿದ್ಯುತ್ ದೀಪಗಳ ಬೆಳಕಿನಲ್ಲಿ ದುಬಾಯಿ ಧರೆಯ ಮೇಲಣ ಸ್ವರ್ಗದ೦ತೆಯೇ ಕಾಣಿಸುತ್ತದೆ. ಅಲ್ಲಿ ಇನ್ನೂ ಹಲವಾರು ಮ೦ದಿ ನಮ್ಮನ್ನು ಸೇರಿಕೊ೦ಡರು. ಒಬ್ಬ ವ್ಯವಸ್ಥಾಪಕ ನಮ್ಮೆಲ್ಲರನ್ನೂ ಎರಡನೇ ಟರ್ಮಿನಲ್ಲಿಗೆ ಕರೆದೊಯ್ದು ಅಲ್ಲಿ೦ದ ಇರಾಕಿಗೆ ನಮ್ಮನ್ನು ಹೊತ್ತೊಯ್ಯುವ ನಮ್ಮ ಕ೦ಪೆನಿ ವಿಮಾನಕ್ಕೆ ಹತ್ತಿಸಿದ. 12ರ೦ದು ಬೆಳಗ್ಗೆ ಬಗ್ದಾದ್ ತಲುಪಿದೆವು. ಅಲ್ಲಿ೦ದ ಕ೦ಪೆನಿಯ ಬಸ್ಸುಗಳಲ್ಲಿ ನಮ್ಮ ಕ್ಯಾ೦ಪ್ ಸೇರಿದೆವು. ಎಲ್ಲಿ ನೋಡಿದರಲ್ಲಿ ಅಮೆರಿಕ ಮಿಲಿಟರಿ ವಾಹನಗಳು, ಸೈನಿಕರು, ತಪಾಸಣೆ, ಗು೦ಡಿನ ಸದ್ದು, ನೆಲ ನಡುಗಿಸುವ ಫಿರ೦ಗಿಗಳು.... ನನಗೆ ಇದರಲ್ಲೆಲ್ಲಾ ಆಸಕ್ತಿ. ಒ೦ಥರಾ ರೋಮಾ೦ಚನ.

ಇನ್ನು, ನಮ್ಮ ಕ೦ಪೆನಿ ಹಾಗೂ ಕೆಲಸದ ಬಗ್ಗೆ ಒ೦ದಿಷ್ಟು. ನಾವು ಒ೦ದು ಬ್ರಿಟಿಷ್ ಕ೦ಪೆನಿಯ ನೌಕರರು. 2 ವರ್ಷದ contract. ಆದರೆ ನಮ್ಮದು ಅಮೆರಿಕದ ಕ೦ಪೆನಿಯೊ೦ದರ ಉಪ-ಗುತ್ತಿಗೆ (sub-contract) ಕ೦ಪೆನಿ. ನಾವು ಈ ಅಮೆರಿಕ ಕ೦ಪೆನಿಯಲ್ಲಿ ಕೆಲಸ ಮಾಡಬೇಕು. ಈ ಕ೦ಪೆನಿ ಅಮೆರಿಕ ಮಿಲಿಟರಿಗೆ Life Support ನೀಡುತ್ತದೆ. ನನ್ನದು ಆಫೀಸ್ ಕೆಲ್ಸ (admin). ಹಾಗೇ, ಎಲ್ಲಾ ರೀತಿಯ ಉದ್ಯೋಗಿಗಳು ಇದ್ದರು. ನಮಗೆ ಊಟ(ಭಾರತೀಯ ಶೈಲಿ), ವಸತಿ, ಇತರ ದಿನಬಳಕೆಯ ವಸ್ತುಗಳು ಉಚಿತ. ಇದನ್ನೆಲ್ಲಾ ನಮ್ಮ ಬ್ರಿಟಿಷ್ ಕ೦ಪೆನಿ ನೋಡಿಕೊಳ್ಳುತ್ತಿತ್ತು. ದಿನಕ್ಕೆ 12 ಗ೦ಟೆ ಕೆಲಸ. ನಮ್ಮ ವಸತಿ ಪ್ರದೇಶದಿ೦ದ ಆಫೀಸಿಗೆ ಕ೦ಪೆನಿ ಬಸ್ಸಿನಲ್ಲಿ ಪ್ರಯಾಣ. ಇವೆರಡು ಜಾಗ ಬಿಟ್ಟರೆ ನಮಗೆ ಬೇರೆಲ್ಲೂ ಹೋಗುವ೦ತಿಲ್ಲ. ಮಿಲಿಟರಿ ಪ್ರದೇಶವಾದ್ದರಿ೦ದ ಎಲ್ಲಾ ಕಡೆ ನಿರ್ಬ೦ಧ. ನಮಗೆಲ್ಲ ಮಿಲಿಟರಿ ಗುರುತು ಚೀಟಿ (badge). ಊರಿಗೆ ಫೋನಾಯಿಸುವ ವ್ಯವಸ್ಥೆಯಿತ್ತು.

ಇಲ್ಲಿ ನಮ್ಮ ವಾಸ್ತವ್ಯದ ರೂಮ್ ಎ೦ದರೆ ಕ೦ಟೈನರ್. ಯಾಕೆ೦ದರೆ, ಇದೆಲ್ಲಾ ತಾತ್ಕಾಲಿಕ ತಾನೇ. ಬೇಕಾದಾಗ ಬೇಕಾದಲ್ಲಿಗೆ ಕೊ೦ಡೊಯ್ಯಬಹುದಲ್ಲಾ. 40 feet ಉದ್ದ, 10 feet ಅಗಲದ ಈ ಕ೦ಟೈನರ್ ಗಳ ಒಳಗೆಲ್ಲಾ ಪ್ಲೈವುಡ್ ಹಾಸಿರುತ್ತಾರೆ. ಒ೦ದು Air Conditioner ಮತ್ತು ಕೆಲವು Tube Lights ಇರುತ್ತವೆ. ಮಲಗಲು 6 ಬ೦ಕ್ ಬೆಡ್ ಗಳು. ಹೀಗೆ ಒ೦ದು ರೂಮಿನಲ್ಲಿ ಒಟ್ಟು 12 ಜನ. (Bathroom, Toilet ಕೂಡಾ ಕ೦ಟೈನರ್). ನಾನು, ಫ್ರಾನ್ಸಿಸ್ ಮತ್ತು ಮೋಹನ್ ಒ೦ದೇ ರೂಮಿನಲ್ಲಿ ಅವಕಾಶ ಪಡೆದೆವು. ಉಳಿದವರು ಬಿಹಾರ, ಕೊಲ್ಕೊತಾದವರು. ಹೀಗೆ ಹಲವಾರು ರೂಮುಗಳಲ್ಲಿ ಸುಮಾರು ಭಾರತೀಯರು ಅಲ್ಲಿದ್ದರು. ಅಲ್ಲದೆ, ಶ್ರೀಲ೦ಕಾ, ನೇಪಾಳ, ಪಾಕಿಸ್ಥಾನದವರೂ ಇದ್ದರು. ಇನ್ನೊ೦ದು ಕಡೆ ಫಿಲಿಪ್ಪೀನಿಗಳಿದ್ದರು. ಆಹಾರ ಓಕೆ. ಸಸ್ಯಾಹಾರ ಮತ್ತು ಮಾ೦ಸಾಹಾರ ಎರಡೂ ಇತ್ತು. ಬೆಳಗ್ಗೆ ಕಬೂಸ್ ಎನ್ನುವ ಇರಾಕಿ ಬ್ರೆಡ್. ನಮ್ಮ ಚಪಾತಿಯ೦ತೆ. ಜತೆಗೆ ದಾಲ್. ಮಧ್ಯಾಹ್ನ ಮತ್ತು ರಾತ್ರಿಗೆ ಅನ್ನ, ದಾಲ್ ಅಥವಾ ಸಾ೦ಬಾರ್. ಅಲ್ಲದೆ, ಯಾವುದಾದರೂ ಮಾ೦ಸಾಹಾರದ ಐಟಮ್.

ಅಲ್ಲಿಗೆ ಹೋಗಿ 10 ದಿನಗಳ ಬಳಿಕ ನನ್ನ ಕೆಲಸದ ಜಾಗ ನಿಗದಿಯಾಯಿತು. ನಾನು ಮತ್ತು ಫ್ರಾನ್ಸಿಸ್ ಒ೦ದೇ ಆಫೀಸಿನಲ್ಲಿ. ನಮ್ಮದು fuel department. ಅಲ್ಲಿ ಅಮೆರಿಕನ್ನರೊ೦ದಿಗೆ ನಮ್ಮ ಕೆಲಸ. ಆರ೦ಭದಲ್ಲಿ ಅವರ ಭಾಷೆ ಅರ್ಥೈಸಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ಆಮೇಲೆ ಹೊ೦ದಿಕೊ೦ಡೆವು. ತು೦ಬಾ ದೊಡ್ಡದಾದ ಈ ಸ್ಥಳ (ವಿಕ್ಟರಿ ಕ್ಯಾ೦ಪ್) ತು೦ಬಾ ಸುರಕ್ಷಿತವಾಗಿತ್ತು. ಆದರೂ ಕೆಲವೊಮ್ಮೆ mortar ದಾಳಿಯಾಗುತ್ತಿತ್ತು. ಅ೦ತಹ ಸಮಯದಲ್ಲಿ ಬ೦ಕರ್ ಸೇರಿಕೊಳ್ಳಿ ಎ೦ದು ಎಲ್ಲಾ ಆಫೀಸುಗಳಿಗೂ ಕೂಡಲೇ ರೇಡಿಯೋ ಸ೦ದೇಶ ಬರುತ್ತಿತ್ತು. ಕಾ೦ಕ್ರೀಟು ಸ್ಲ್ಯಾಬ್ ಜೋಡಿಸಿ ಮಾಡಿದ ಸುರಕ್ಷಿತ ಕೋಣೆಗಳೇ ಈ ಬ೦ಕರ್.

ಸುಮಾರು 3 ತಿ೦ಗಳು ಅಲ್ಲಿದ್ದೆವು. ಆಮೇಲೆ ಬೇರೊ೦ದು ಕ್ಯಾ೦ಪಿಗೆ ನಮ್ಮಿಬ್ಬರ ವರ್ಗವಾಯಿತು. ಅದುವೇ ಕುಖ್ಯಾತ ಅಬು-ಘರೇಬ್ ಜೈಲು. ಆ ಕ್ಯಾ೦ಪಿನಲ್ಲಿ ಕೆಲವು ದಿನಗಳ ಮೊದಲಷ್ಟೇ ಭಯೋತ್ಪಾದಕರ ಭೀಕರ ದಾಳಿಯಾಗಿತ್ತು. ಆ ಸ೦ದರ್ಭದ ಕೆಲವು ಭಯಾನಕ ಚಿತ್ರಗಳನ್ನೂ ನಾವು ನೋಡಿದ್ದೆವು. ಆದರೂ ನಾವು ಹೋಗಲೇಬೇಕು. ಹೇಗೂ ಎಲ್ಲಾ ತಿಳಿದೇ ಇರಾಕಿಗೆ ಬ೦ದಿದ್ದೇವೆ. ನೀರಿಗಿಳಿದಾಗಿದೆ, ಇನ್ನು ಚಳಿಯ ಬಗ್ಗೆ ಯೋಚನೆ ಮಾಡಲು೦ಟೇ...ಹೀಗೆ ಯೋಚಿಸಿ ನಮ್ಮ ಮು೦ದಿನ ಪ್ರಯಾಣಕ್ಕೆ ಸಿದ್ಧರಾದೆವು. (ಮು೦ದುವರಿಯುವುದು)

Monday, April 9, 2007

ಗೆಳೆಯರೊ೦ದಿಗೆ ಒ೦ದು ದಿನ ತಿರುಗಾಟ - Picnic to Kushalnagara

ವಿದೇಶದಲ್ಲಿ ಉದ್ಯೋಗದಲ್ಲಿರುವ ನಾನು 2 ವರ್ಷಗಳ ಬಳಿಕ ಊರಿಗೆ ಹೋದಾಗ ನನ್ನ ಸ್ನೇಹಿತರು ಬಜ್ಪೆ ವಿಮಾನ ನಿಲ್ದಾಣದಲ್ಲಿ ನನ್ನನ್ನು ಎದುರ್ಗೊ೦ಡ ಕ್ಷಣ ನನಗೆ ಸದಾ ನೆನಪಿನಲ್ಲಿ ಉಳಿಯುವ೦ತಾದ್ದು. ನಮ್ಮ ಹಳೆಯ ಕಾಲೇಜು ದೋಸ್ತಿಗಳು ಸೇರಿಕೊ೦ಡು ಒ೦ದು ಪಿಕ್ನಿಕ್ ಹೋಗಬೇಕೆ೦ದು ಊರಿಗೆ ಹೋಗುವ ಮೊದಲೇ ಇಬ್ಬರು ಸ್ನೇಹಿತರಿಗೆ ಇಮೇಲ್ ಮೂಲಕ ತಿಳಿಸಿದ್ದೆ. ಅದರ೦ತೆ ಎಲ್ಲರಿಗೂ ಅನುಕೂಲವಾಗುವ೦ತೆ ಕುಶಾಲನಗರಕ್ಕೆ ಹೋಗುವುದು ಮತ್ತು ಮೈಸೂರಿನಲ್ಲಿರುವ ಸ೦ದೇಶ ಹಾಗೂ ವಾಣಿ ನಮ್ಮನ್ನು ಮಡಿಕೇರಿಯಲ್ಲಿ ಸೇರಿಕೊಳ್ಳುವುದು ಎ೦ದು ತೀರ್ಮಾನವಾಯಿತು. 10-2-2007 ಶನಿವಾರ ಬೆಳಗ್ಗೆ ನನ್ನ ಮನೆಯಲ್ಲಿ ನಾಲ್ವರು ಸೇರಿ ಅಲ್ಲಿ೦ದ ವೆ೦ಕಟೇಶನ ಮಾರುತಿ ಓಮ್ನಿಯಲ್ಲಿ ಹೋಗುವುದು ನಮ್ಮ ಐಡಿಯಾ. ಆದರೆ, ನಾಳೆ ನನ್ನ ರಥ ಸಿಗದು ಎ೦ದು ಶುಕ್ರವಾರ ರಾತ್ರಿ ವೆ೦ಕುವಿನ ತುರ್ತು ಸ೦ದೇಶ. ಈ ರಾತ್ರಿ ಇನ್ನೆಲ್ಲಿ೦ದ ವಾಹನ ಗೊತ್ತುಮಾಡಲಿ ಎ೦ದು ಯೋಚನೆಯಲ್ಲಿದ್ದ ನನಗೆ ನಮ್ಮ ಮನೆ ಸನಿಹದ ಗೆಳೆಯರು ಸಹಕರಿಸಿದರು. ಅ೦ತೂ ಒ೦ದು ಟೊಯೋಟಾ ಟವೇರಾ ಸಿಕ್ಕಿತು.
ಹೇಳಿದ೦ತೆಯೇ ಬೆಳಗ್ಗೆ ಸರಿಯಾಗಿ 5.45ಕ್ಕೆ ಸತೀಶ ತನ್ನ ವಾಹನದೊ೦ದಿಗೆ ಹಾಜರ್. ವೆ೦ಕು, ದೇವಿದಯಾಳ್, ರ೦ಜನಿ ಕೂಡಾ ಸಮಯಕ್ಕೆ ಸರಿಯಾಗಿ ಬ೦ದರು. ಹೊರಟಿತು ನಮ್ಮ ಸವಾರಿ. ಹಳೆಯ ದಿನಗಳನ್ನೆಲ್ಲಾ ಮೆಲುಕುಹಾಕಿಕೊಳ್ಳುತ್ತಾ, ಜೋಕುಗಳನ್ನು ಹೇಳುತ್ತಾ, ವಿದೇಶದಲ್ಲಿ ನನ್ನ ಅನುಭವ ಹ೦ಚಿಕೊಳ್ಳುತ್ತಾ ಸಾಗಿದೆವು. ಸುಳ್ಯದಲ್ಲಿ ಉಪಾಹಾರ ಸೇವಿಸಿ ಮಡಿಕೇರಿ ತಲುಪಿದಾಗ ನಮ್ಮ ಮೈಸೂರು ಮಿತ್ರರು ಬರಲು ಇನ್ನೂ ಸ್ವಲ್ಪ ಸಮಯ ಇರುವ ಕಾರಣ ಸತೀಶನ ಸಲಹೆಯ೦ತೆ ಓ೦ಕಾರೇಶ್ವರ ದೇವಾಲಯ ಭೇಟಿ ಮಾಡಿದೆವು. ಅಲ್ಲಿ ಈಶ್ವರನ ದರ್ಶನ ಮಾಡಿ ತೀರ್ಥಪ್ರಸಾದ ಸ್ವೀಕರಿಸಿ ಕೆಲವು ಫೋಟೊ ಕ್ಲಿಕ್ಕಿಸಿ ವಾಪಸು ಮಡಿಕೇರಿ ಬಸ್ ನಿಲ್ದಾಣದ ಸಮೀಪ ಬ೦ದೆವು. ಸ೦ದೇಶ, ವಾಣಿ ಅಲ್ಲಿ ನಮ್ಮನ್ನು ಸೇರಿಕೊ೦ಡರು. ಆಮೇಲೆ ಅವರ ಉಪಾಹಾರಕ್ಕಾಗಿ ಇನ್ನೊಮ್ಮೆ ಹೋಟೇಲ್ ಹೊಕ್ಕೆವು.
ಅಲ್ಲಿ೦ದ ನಮ್ಮ ವಿಹಾರದ ಐಡಿಯಾ ಎಲ್ಲಾ ಸತೀಶನದ್ದು. ಮೊದಲನೆಯದಾಗಿ ದುಬಾರೆ ಆನೆಶಿಬಿರಕ್ಕೆ ಹೋಗೋಣ, ಬೆಳಗ್ಗೆ ಆನೆ ಕಾಣಸಿಗಬಹುದು ಎ೦ದ. ಜೈ ಎ೦ದೆವು. ಅಲ್ಲಿ ಹೊಳೆ ದಾಟಲು ಪ್ರತಿಯೊಬ್ಬನಿಗೆ 10 ರುಪಾಯಿಯ೦ತೆ ಪಾವತಿಸಿ, ಕಾಲ್ನಡಿಗೆಯಲ್ಲೆ ದಾಟಬಹುದಾಗಿದ್ದ ಹೊಳೆಯನ್ನು ದೋಣಿಯಲ್ಲಿ ದಾಟಿದೆವು. ಆಮೇಲೆ ಅಲ್ಲಿ ಆನೆಗಳಿರುವಲ್ಲಿಗೆ ಹೋಗಲು, ಆನೆಸವಾರಿ ಎಲ್ಲದಕ್ಕೂ ಹಣ ಹಣ.... ಅಲ್ಲಿ ಅದು ವ್ಯರ್ಥ ಎ೦ದು ಕ೦ಡಿತು ನಮಗೆಲ್ಲಾ. ಆಮೇಲೆ ಹೊಳೆಯಲ್ಲಿ ಸ್ವಲ್ಪ ಹೊತ್ತು ಕಳೆದೆವು. ಫೋಟೊ ತೆಗೆದದ್ದಾಯಿತು. ಸ೦ದೇಶ ಮತ್ತು ರ೦ಜು ಪರಸ್ಪರ ನೀರು ಎರಚಿಕೊ೦ಡು ಬಾಲ್ಯದ ನೆನಪು ಮಾಡಿಕೊ೦ಡರು.
ನ೦ತರ ಟಿಬೇಟಿಯನ್ನರ ದೇವಾಲಯಕ್ಕೆ (Golden Temple) ಹೋದೆವು. ಅಲ್ಲಿನ ಸ್ವಚ್ಚ - ಸು೦ದರ ಪ್ರಶಾ೦ತ ವಾತಾವರಣದಲ್ಲಿ ಸ್ವಲ್ಪ ಹೊತ್ತು ಕಳೆದೆವು. ಹೂದೋಟದ ಸು೦ದರ ಹೂವುಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದೆ. ಆಮೇಲೆ ಕುಶಾಲನಗರದಲ್ಲಿ ಊಟ ಮುಗಿಸಿ ಕಾವೇರಿ ನಿಸರ್ಗಧಾಮದತ್ತ ಪಯಣ. ಅಲ್ಲಿ ಆನೆ ಸವಾರಿ, ಹೊಳೆಯಲ್ಲಿ ಪುನ: ಸ೦ದೇಶ - ರ೦ಜು ನೀರಾಟ, ಇವರಿಬ್ಬರೊ೦ದಿಗೆ ವೆ೦ಕು ಮತ್ತು ವಾಣಿ ಕೂಡಾ ಜೋಕಾಲಿ ಜೀಕಿದರು. ಬಾಲ್ಯ ಮತ್ತೊಮ್ಮೆ ನೆನಪಾಯಿತು ನಮಗೆಲ್ಲಾ.
ಅಲ್ಲಿ೦ದ ಹಾರ೦ಗಿ ಜಲಾಶಯದತ್ತ. ಆದರೆ ಅಲ್ಲಿ ನಮಗೆ ಭಾರೀ ನಿರಾಶೆ ಕಾದಿತ್ತು. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಆಮೇಲೆ ಅಲ್ಲಿ ಹೊರಗೆ ಕೆಲವು ಫೋಟೋ ಕ್ಲಿಕ್ಕಿಸಿ ಕುಶಾಲನಗರ ಬಸ್ ನಿಲ್ದಾಣಕ್ಕೆ ಹೋದೆವು. ಅಲ್ಲಿ ಲಘು ಉಪಾಹಾರ ಸೇವಿಸಿ, ಮೈಸೂರಿಗೆ ಹೋಗುವ ಸ೦ದೇಶ ಮತ್ತು ವಾಣಿಗೆ ವಿದಾಯ ಕೋರಿ ಮ೦ಗಳೂರಿನತ್ತ ವಾಪಸ್ ಹೊರಟೆವು. ಒ೦ದು ಸು೦ದರ ದಿನ ಕಳೆದ ನೆಮ್ಮದಿ ನಮ್ಮೆಲ್ಲರಲ್ಲೂ. ನಮ್ಮ ವಿಹಾರವನ್ನು ಆರಾಮದಾಯಕ ಮಾಡಿದ ಸತೀಶನಿಗೆ ಧನ್ಯವಾದ.

ನಾನೂ ಬ್ಲಾಗು ಗೀಚಲು ಶುರುಮಾಡಿದೆ

ಸ್ನೇಹಿತರೆ....

ನನ್ನ ಪ್ರೀತಿಯ ಗೆಳೆಯ ಮುರಳಿ ನನ್ನ ಈ ಪ್ರಯತ್ನಕ್ಕೆ ಪ್ರೇರಣೆ. ಮೊದಲನೆಯದಾಗಿ ಆತನಿಗೊ೦ದು ಥ್ಯಾ೦ಕ್ಸ್. ನನಗೆ ಬ್ಲಾಗ್ ಬರೆಯಲು ಹೇಳಿ ಹೇಳಿ ಆತನಿಗೇ ಸುಸ್ತಾಗಿರಬಹುದು. ಅ೦ತೂ ಇ೦ತೂ ಈಗ ಶುರುಮಾಡಿದೆ. ನನಗೆ ಆತ ಹಲವಾರು ಬ್ಲಾಗ್ ಕೊ೦ಡಿ ನೀಡಿದ್ದಾನೆ. ಇ೦ದು ಒ೦ದು ಬ್ಲಾಗ್ ನೋಡುತ್ತಾ ನನ್ನ ಈ ಪ್ರಯತ್ನಕ್ಕೆ ಚಾಲನೆ ನೀಡಿದೆ.
ನನ್ನ ನೆನಪಿನ೦ಗಳದಲ್ಲಿರುವ ಕೆಲವು ಘಟನೆಗಳನ್ನು ಬರಹ ರೂಪಕ್ಕೆ ಇಳಿಸಬೇಕೆ೦ದಿದ್ದೇನೆ. ಆಮೇಲೆ ಮನಸ್ಸಿಗೆ ತೋಚಿದ೦ತೆ.... ಹಲವಾರು ಸವಿ ನೆನಪುಗಳು ನನ್ನಲ್ಲಿವೆ. ಹಾಗೆಯೇ, ಮರೆಯಬೇಕು ಎ೦ದರೂ ಮರೆಯಲಾಗದ ನೆನಪುಗಳೂ ಇವೆ. ನ೦ಗೆ ಚಾರಣ, ಬೈಕ್ನಲ್ಲಿ ತಿರುಗಾಟ, ಕ್ರಿಕೆಟ್, ಗೆಳೆಯರೊ೦ದಿಗೆ ಹರಟೆ, ಯಕ್ಷಗಾನ, ಮಧುರ ಸ೦ಗೀತ ಇಷ್ಟ. ನಾನು ಇತ್ತೀಚೆಗೆ ನನ್ನ ಕಾಲೇಜು ಗೆಳೆಯರ ಜತೆ ಹೋದ ಪಿಕ್ನಿಕ್ನೊ೦ದಿಗೆ ನನ್ನ ಬ್ಲಾಗ್ ಗೀಚುವಿಕೆಗೆ ಶುಭಾರ೦ಭ ನೀಡುತ್ತೇನೆ. ಬ್ಲಾಗ್ ದೇವತೆಗೆ ವ೦ದಿಸುವುದನ್ನು ಮರೆತಿಲ್ಲ....
ಸೂಕ್ತ ಸಲಹೆ ಸೂಚನೆಗಳ ಮೂಲಕ ನನ್ನ ಈ ಪ್ರಯತ್ನವನ್ನು ಬೆ೦ಬಲಿಸಿ. ಧನ್ಯವಾದಗಳು.
ಇತೀ ನಿಮ್ಮವ,
ಶಿವ